ಬಾಲ್ಟಮೋರ್
ಅಮೆರಿಕ ಸಂಯುಕ್ತ ಸಂಸ್ಥಾನಗಳ ಮೇರಿಲ್ಯಾಂಡ್ ರಾಜ್ಯದ ಒಂದು ಕೌಂಟಿ ಮತ್ತು ಆಡಳಿತ ಕೇಂದ್ರ ನಗರ. ಕೈಗಾರಿಕಾ ಕೇಂದ್ರ, ದೊಡ್ಡಬಂದರು ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನದ ಮಹಾನಗರಗಳಲ್ಲಿ ಏಳನೆಯದು. ಚೆಸ್‍ಪೀಕ್ ಕೊಲ್ಲಿಯ ಉತ್ತರಕ್ಕೆ ಪಟ್ಯಾಪ್‍ಸ್ಕೊ ನದಿಯ ಅಳಿವೆ ಭಾಗದಲ್ಲಿರುವ ಬಾಲ್ಟಮೋರ್ ಸ್ವತಂತ್ರಾಡಳಿತ ನಗರ. ನಗರ ವಿಸ್ತೀರ್ಣ 238 ಚಕಿಮೀ. ಜನಸಂಖ್ಯೆ 9,05,787 (1970) ಮಹಾನಗರದ ವಿಸ್ತೀರ್ಣ 6,123 ಚಕಿಮೀ ಜನ ಸಂಖ್ಯೆ 2,071,016 (1970).

ಬಾಲ್ಟಮೋರ್ ನಗರದಲ್ಲಿ ಸುಮಾರು 200ಕ್ಕೂ ಹೆಚ್ಚು ವಿವಿಧ ಕಾರ್ಖಾನೆಗಳಿವೆ. ಉಕ್ಕು, ತಾಮ್ರ, ಕಬ್ಬಿಣ, ರಾಸಾಯನಿಕ ವಸ್ತುಗಳು, ವಿದ್ಯುತ್ ಉಪಕರಣ ಮುಂತಾದವುಗಳ ತಯಾರಿಕೆಗೆ ನಗರ ಹೆಸರಾಗಿದೆ. ಮೊದಲು ಈ ನಗರ ಸ್ಥಾಪಕರು ಸ್ಥಳೀಯವಾಗಿ ಹೊಗೆಸೊಪ್ಪನ್ನು ಬೆಳೆಯುತ್ತಿದ್ದರು. ಗೋದಿಯ ನಿರ್ಯಾತ ಪ್ರಾರಂಭದೊಡನೆ ನಗರ ವ್ಯಾಪಾರ ವಾಣಿಜ್ಯದಲ್ಲಿ ಅಭಿವೃದ್ಧಿಗೊಂಡಿತು. ಈ ನಗರ ಅಭಿವೃದ್ಧಿಗೆ ಪ್ರಕೃತಿದತ್ತ ಬಾಲ್ಟಮೋರ್ ಬಂದರೂ ಕಾರಣವೆನ್ನಬಹುದು. ಚೆಸ್‍ಪೀಕ್‍ಕೊಲ್ಲಿ ಮತ್ತು ಪಟ್ಯಾಪ್‍ಸ್ಕೊ ನದಿ ಜಲಮಾರ್ಗ ಸೌಲಭ್ಯ ಈ ನಗರಕ್ಕಿದೆ. ಬಂದರಿನಲ್ಲಿ ನಡೆಯುವ ವ್ಯಾಪಾರ ವ್ಯವಹಾರದ ಮೊತ್ತ ಒಟ್ಟು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲೇ ಆರನೆಯ ಸ್ಥಾನ ಪಡೆದಿದೆ. 1797ರಲ್ಲಿ ಅಮೆರಿಕದ ಸಂಸತ್ತು ಅಮೆರಿಕದ ನೌಕಾಪಡೆಯ ಸ್ಥಾಪನೆಗೆ ಅನುಮೋದನೆ ನೀಡಿದಾಗ ಮೊದಲ ನೌಕೆ ಕಾನ್‍ಸ್ಟಲೇಷನ್ ಬಾಲ್ಟಮೋರ್ ರೇವಿನಿಂದ ಹೊರಟಿತು. ಆ ಹಡಗನ್ನು ಈಗ ಬಾಲ್ಟಮೋರ್ ರೇವಿನಲ್ಲಿ ಸ್ಮರಣಾರ್ಥವಾಗಿ ಇರಿಸಿದ್ದಾರೆ. ಬ್ರಿಟಿಷರು ಫಿಲಡೆಲ್ಫೀಯಾ ನಗರವನ್ನು ಹಿಡಿದಾಗ ಅಮೆರಿಕ ಕಾಂಗ್ರೆಸ್ 1776 ಡಿಸೆಂಬರ್ ಹಾಗೂ 1777 ಮಾರ್ಚ್‍ನಲ್ಲಿ ಬಾಲ್ಟಮೋರ್‍ನಲ್ಲಿ ಸಭೆ ಸೇರಿತ್ತು. ಅಮೆರಿಕದ ಪ್ರಥಮ ರೈಲುದಾರಿ ಬಾಲ್ಟಮೋರ್ ಮತ್ತು ಓಹಿಯೋ ನಗರಗಳ ನಡುವೆ 1827ರಲ್ಲಿ ಪ್ರಾರಂಭವಾಯಿತು.

ಏಬ್ರಹಾಮ್ ಲಿಂಕನ್ 1860ರಲ್ಲಿ ಅಧ್ಯಕ್ಷನಾದ ಮೇಲೆ ಪ್ರಾರಂಭವಾದ ಅಂತರ್ಯುದ್ಧ ಹಾಗೂ (1861-65) ಉತ್ತರ ಹಾಗೂ ದಕ್ಷಿಣ ರಾಜ್ಯಗಳ ನಡುವಿನ ಭಿನ್ನಾಭಿಪ್ರಾಯವಿದ್ದಾಗ ಮೇರಿಲ್ಯಾಂಡ್ ಅಮೆರಿಕ ಒಕ್ಕೂಟದಿಂದ ಪ್ರತ್ಯೇಕಗೊಳ್ಳದಿದ್ದರೂ ಅಲ್ಲಿಯ ಜನರಿಗೆ ದಕ್ಷಿಣ ರಾಜ್ಯಗಳ ರಾಜಕೀಯ ಧೋರಣೆ ಹಾಗೂ ಹತ್ತಿ ತೋಟಗಳ ಕಾರ್ಮಿಕರ ಗುಲಾಮ ಪದ್ಧತಿ ರದ್ದು ಮಾಡಬಾರದೆಂಬ ನಿಲುವಿತ್ತು. ಅಂತರ್ಯುದ್ಧ ಮುಗಿಯುವ ತನಕವೂ ಬಾಲ್ಟಮೋರ್ ಮಿಲಿಟರಿ ಆಡಳಿತದಲ್ಲಿತ್ತು. 1904 ಫೆಬ್ರುವರಿ 7ರಂದು ಬಾಲ್ಟಮೋರ್‍ನಲ್ಲಿ ಆದ ಬೆಂಕಿ ಅನಾಹುತ ಅನೇಕ ವಾಣಿಜ್ಯ ಬಡಾವಣೆಗಳನ್ನು ನಾಶ ಮಾಡಿತು. ಒಂದನೆಯ ಮಹಾಯುದ್ಧದ (1914-18) ತರುವಾಯ ಉಕ್ಕಿನ ಕೈಗಾರಿಕೆಯಲ್ಲಿ ಪ್ರಗತಿ ಕಂಡುಬಂತು. ಪೆಟ್ರೋಲ್ ಶುದ್ಧೀಕರಣ ಕಾರ್ಖಾನೆಗಳು ಸ್ಥಾಪಿತವಾದುವು. ನಗರ ಮತ್ತೆ ಹೊಸ ರೂಪ ತಳೆದು ಬೆಳೆಯಲಾರಂಭಿಸಿತು. ಬಾಲ್ಟಮೋರ್ ಇಂದು ಹಡಗು ನಿರ್ಮಾಣದಲ್ಲಿ ವ್ಯಾಪಾರ-ವಾಣಿಜ್ಯಗಳಲ್ಲಿ ಇತರ ಸಾವಿರಾರು ಉದ್ಯಮಗಳಲ್ಲಿ ಮುಂದುವರಿದಿದೆ.

ಬಾಲ್ಟಮೋರ್ ಉನ್ನತ ಶಿಕ್ಷಣ ಕೇಂದ್ರ. ಇಲ್ಲಿ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ (1976), ಗ್ಲೌಷೆರ್ (1885), ಲಿಯೋಲಾ (1852), ಮೇರಿಲ್ಯಾಂಡ್‍ನ ನಾಟ್ರಡಾಮ್ (1873) ಮಾರ್ಗಾನ್ ಸ್ಟೇಟ್ (1867) ಕಾಲೇಜುಗಳಿವೆ. ಮೇರಿಲ್ಯಾಂಡ್ ವಿಶ್ವವಿದ್ಯಾಲಯ (1807) ಬಾಲ್ಟಮೋರ್ ವಿಶ್ವವಿದ್ಯಾಲಯ (1928) ಮುಂತಾದವುಗಳಿವೆ. ಗ್ರಂಥಾಲಯಗಳು, ವಸ್ತುಸಂಗ್ರಹಶಾಲೆ (1913) ಬಾಲ್ಟಮೋರ್ ಕಲಾಶಾಲೆ (1914), ವಾಲ್ಟರ್ ಆರ್ಟ್ ಗ್ಯಾಲರಿ (1931), 1806-21ರ ನಡುವೆ ಕಟ್ಟಿದ ರೋವಾನ್ ಕ್ಯಾಥೋಲಿಕ್ ಚರ್ಚ್ ಮುಂತಾದ ಪ್ರೇಕ್ಷಣೀಯ ಸ್ಥಳಗಳಿವೆ.

1729ರಲ್ಲಿ ಈ ನಗರ ಸ್ಥಾಪನೆಯಾಯಿತು. ಆ ವರ್ಷ ಮೇರಿಲ್ಯಾಂಡ್‍ನ ಶಾಸಕಾಂಗದ ನಿರ್ಣಯದಂತೆ ಪಟ್ಯಾಪ್‍ಸ್ಕೋನದಿ ದಂಡೆಯಲ್ಲಿ 24 ಹೆಕ್ಟೇರ್ ಭೂಪ್ರದೇಶವನ್ನು ಕೊಂಡು ಅದನ್ನು ಹೊಗೆಸೊಪ್ಪು ವ್ಯಾಪಾರದ ಕೇಂದ್ರವಾಗಿ ಪರಿವರ್ತಿಸಿ ಬಾಲ್ಟಮೋರ್ ಎಂದು ನಾಮಕರಣ ಮಾಡಲಾಯಿತು. ಅಮೆರಿಕ ರಾಷ್ಟ್ರದ ರಾಜಧಾನಿಯಾಗಿ ಅಂತರ್ಯುದ್ಧದ ಕಾಲದಲ್ಲಿ ಬಾಲ್ಟಮೋರ್ ಪ್ರಸಿದ್ಧವಾಯಿತು. 1796ರಲ್ಲಿ ಪಟ್ಟಣವೆಂದು ಪರಿಗಣಿಸಲಾಯಿತು. 1814ರಲ್ಲಿ ಬ್ರಿಟಿಷರ ಧಾಳಿಯನ್ನು ಎದುರಿಸಿತು. ಮಾಕ್‍ಹೆನ್ರಿ ಬಂದರಿನಲ್ಲಿ ಹಾರಾಡುತ್ತಿದ್ದ ಅಮೆರಿಕ ಧ್ವಜವನ್ನು ಈ ಹೋರಾಟದ ಕಾಲದಲ್ಲಿ ಕಂಡ ಕವಿ ಫ್ರಾನ್ಸಿಸ್ ಸ್ಕಾಟ್ ದಿ ಸ್ಟಾರ್ ಸ್ಟಾಂಗ್‍ಲ್ಡ್ ಬ್ಯಾನರ್ ಎಂಬ ಗೀತೆ ರಚಿಸಿದ. ಅದನ್ನು ಅಮೆರಿಕ ಸಂಯುಕ್ತ ಸಂಸ್ಥಾನ ತನ್ನ ರಾಷ್ಟ್ರಗೀತೆಯಾಗಿ ಸ್ವೀಕರಿಸಿತು. ಬಾಲ್ಟಮೋರ್‍ನಿಂದ ಓಹಿಯೋ, ಇಂಡಿಯಾನಾ, ಇಲಿನಾಯ್ಸ್ ಮುಂತಾದ ಕಡೆಗೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕವಿದೆ. ಭೂ, ಜಲ ಮಾರ್ಗಗಳಲ್ಲದೆ ಇದೊಂದು ವಾಯುಮಾರ್ಗದ ಮುಖ್ಯ ನಿಲ್ದಾಣ ಕೂಡ.
(ವಿ.ಜಿ.ಕೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ